Sunday, 8 March 2015

ಯಾನ - ಅಂತರಿಕ್ಷದಲ್ಲೊಂದು ಪ್ರಯಾಣ!

ಯಾನ ಓದಿ ಮುಗಿಸಿದ್ದೆ. ಭೈರಪ್ಪನವರು ಸೊಗಸಾಗಿ ಬರೆದಿದ್ದಾರೆ. ಸುಮಾರು ಎರಡು ವರ್ಷಗಳವರೆಗೂ ಅಂತರಿಕ್ಷ, ವಿಮಾನಯಾನಗಳ ಬಗ್ಗೆ ಅಭ್ಯಾಸ ನಡೆಸಿ, ಸಮಾಲೋಚನೆಗಳಲ್ಲಿ ಪಾಲ್ಗೊಂಡು, ಅನುಭವಿ ವಿಜ್ಞಾನಿಗಳನ್ನು ಭೇಟಿ ಮಾಡಿ ಅವರಿಂದ ಜ್ಞಾನಾರ್ಜನೆ ಪಡೆದು,  ಸಾಕಷ್ಟು ಪುಸ್ತಕಗಳ ಅಧ್ಯಯನವನ್ನು ನಡೆಸಿದ್ದರ ಪ್ರತಿ ಫಲದಿಂದಲೇ ಯಾನ ಕಾದಂಬರಿ ಅಷ್ಟು ಸೊಗಸಾಗಿ ಮೂಡಿ ಬಂದಿರುವುದು.

ಸೈನ್ಸ್ ಮತ್ತು ಟೆಕ್ನಾಲಜೀ ಮನುಕುಲವನ್ನು ಮೀರಿ ಸಾಗಿದೆ. ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಮಾನವ ಚಂದ್ರ ಗ್ರಹಕ್ಕೆ ಪಾದಾರ್ಪಣೆ ಮಾಡಿ ಬಂದ ಮೇಲೆ, ಭೂಮಿಯನ್ನು ಬಿಟ್ಟು ಬೇರೊಂದು ಗ್ರಹದ  ಮೇಲೂ ಮನುಷ್ಯ ವಾಸಿಸಲು ಸಾಧ್ಯ ಎಂದು ಸಾಭೀತುಪಡಿಸಿದ್ದಾನೆ. ಇದರ ಪ್ರಯತ್ನವೇ 'Mission to Mars'. ಇಂತಹ ಒಂದು ಸಮಾಲೋಚನೆಯನ್ನೇ ನಾವು ಯಾನ ಕಾದಂಬರಿಯಲ್ಲಿ ಕಾಣಬಹುದು. ಮಾನವನ ಅಂತರಿಕ್ಷ ಪ್ರಯಾಣ ಹೇಗಿರಬಹುದು, ಅದರಲ್ಲಿ ಒಳಗೊಳ್ಳುವ ಸಿದ್ದತೆ, ಅಭ್ಯಾಸ, ಜ್ಞಾನ, ಯಾನಿಗಳ ಮನಸ್ಥಿತಿ ಎಲ್ಲವನ್ನೂ ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದಾರೆ. ಓದಲು ಶುರುಮಾಡಿದರೆ ಮುಗಿಯುವವರೆಗೂ ನಮ್ಮ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಆಕರ್ಷಣೆ ಯಾನಕ್ಕಿದೆ. ಇದು ಎಲ್ಲರೂ ಓದಬೇಕಾದ ಒಂದು ಅಧ್ಬುತ ಪುಸ್ತಕ ಎಂದು ಹೇಳಬಹುದು.

ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ನನಗನಿಸಿದ್ದು ಯಾನದ ಅಂತ್ಯವನ್ನು ಸ್ವಲ್ಪ ವಿಭಿನ್ನವಾಗಿ ಮುಗಿಸಬಹುದಿತ್ತು ಅಂತ. ಆಕಾಶ್ ಹಾಗೂ ಪ್ರಮೇಧಿನಿಗೆ ತಮ್ಮ ಹುಟ್ಟಿನ ಅರಿವು ತಿಳಿದಿತ್ತು. ಸುಮಾರು 25 ವರುಷಗಳ ಹಿಂದೆ ಅಂತರಿಕ್ಷ ಯಾನದಲ್ಲೇ ತಮ್ಮ ಹುಟ್ಟಿನ ಆರಂಭವಾದುದು ಎಂದು ಅವರಿಗೆ ಕಂಪ್ಯೂಟರ್ನ ಓದಿನ ಮೂಲಕ ತಿಳಿದಿತ್ತು ಹಾಗೂ ಅವರು ತಮ್ಮ ಅಪ್ಪ ಅಮ್ಮನ ಕಥೆಗಳನ್ನು ಓದಿದ್ದರಿಂದ ವಿಷಯ ಇನ್ನೂ ಮನದಟ್ಟಾಗಿತ್ತು. ಹೀಗಿದ್ದರೂ ಸಹ ಆಕಾಶನಿಗೆ ತಾನು ಕೃತಕ ಭ್ರೂಣದಿಂದ ಹುಟ್ಟು ಪಡೆದದ್ದು ಅಂತ ತಿಳಿದಾಗ ಅವನ ಪ್ರತಿಕ್ರಿಯೆ ಅಷ್ಟು ಸಮಂಜಸ ಎನಿಸಲಿಲ್ಲ. ತನ್ನ ಮೂಲ ತಂದೆ ತಾಯಿಯ ವಿವರಗಳನ್ನು ಪಡೆಯಲು ಅವನು ಪಟ್ಟ ಪ್ರಯತ್ನ, ತನ್ನ ಅಮ್ಮ ಉತ್ತಾರಾಳ ಬಗ್ಗೆ ನಡೆದು ಕೊಂಡ ರೀತಿ, ತನ್ನ ಅಪ್ಪ, ಅಪ್ಪನೇ ಅಲ್ಲ ಎಂದು ಅವರನ್ನು ಸಂಭೋದಿಸಿದ ರೀತಿ, ನಡವಳಿಕೆ ಬಹು ಬಾಲಿಶ ಅನಿಸುತ್ತದೆ. ಆದರೆ ಅದೇ ಪರಿಸ್ಥಿತಿಯಲ್ಲಿದ್ದ ಮೇಧಿನಿ ತನ್ನ ತಾಯಿಯ ಬಗ್ಗೆ ತೋರಿದ ಪ್ರೀತಿ, ಕಾಳಜಿ , ಆಕಾಶನ ನಡವಳಿಕೆಯಿಂದ ಉತ್ತರ ಘಾಸಿಯಾದಾಗ ತನ್ನ ತಾಯಿಗೆ ಆಸರೆಯಾಗಿ ನಿಂತ ಅವಳ ಗುಣ ಪ್ರಶಂಸನೀಯ.

ಆಕಾಶ ಹಾಗೂ ಮೇಧಿನಿ ಇಬ್ಬರಿಗೂ ತಮ್ಮ ತಂದೆ ತಾಯಿಯ ಹಿಂದಿನ ಚರಿತ್ರೆಯ ಸಂಪೂರ್ಣ ಅರಿವಿತ್ತು. ಆದರೆ ಉತ್ತರ ಹಾಗೂ ಸುಧರ್ಶನ್ಗೆ ಪರಸ್ಪರರ ಪೂರ್ವ ಚರಿತ್ರೆ ತಿಳಿದಿರಲಿಲ್ಲ. ಅವರು ತಿಳಿಯುವುದಕ್ಕೆ ಪ್ರಯತ್ನವನ್ನೂ ಪಟ್ಟಿರಲಿಲ್ಲ. ಅವರಿದ್ದ ಮನೋಸ್ಥಿತಿ ಅವರನ್ನು ಪರಸ್ಪರ ಪರಿಚಯಿಸಿಕೊಳ್ಳುವುದನ್ನು ಮರೆತಿತ್ತು. ಪರಿಸ್ಥಿತಿಯ ಕೈಗೊಂಬೆಗಳಾಗಿದ್ದರು. ಇದರ ಅರಿವೆಯೇ ಇಲ್ಲದೆ ಅವರು 35 ವರುಷಗಳ ಕಾಲ ತಮ್ಮ ಬದುಕನ್ನು ತಳ್ಳಿದ್ದರು. ಒಬ್ಬರ ಬಗ್ಗೆ ಮತ್ತೊಬ್ಬರು ಮನಸ್ಸಿನಲ್ಲಿಯೇ ಧೂಷಿಸಿಕೊಂಡಿದ್ದರು. ಇವರಲ್ಲಿದ್ದ ಮನಸ್ಸಿನಾಳದ ಬೇಯಿಗೆಯನ್ನು ಇಬ್ಬರೂ ಹಂಚಿಕೊಳ್ಳಲು ಪ್ರಯತ್ನಿಸಿಲಿಲ್ಲ. ಆದರೆ ಆಕಾಶ, ಮೇಧಿನಿ ಇವರಿಬ್ಬರ ಕಥೆಯನ್ನು ಅರಿತ ಬಳಿಕ, ಅವರ ಬಾಳಿನ ವ್ಯಥೆಯನ್ನು ತಿಳಿದ ನಂತರ ಇಬ್ಬರನ್ನೂ ಒಂದು ಮಾಡುವ ಪ್ರಯತ್ನವನ್ನು ಮಾಡಬಹುದಿತ್ತು. ಅವರಿಬ್ಬರ ಮನಸ್ಸಿನಲ್ಲಿದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಮುಂದಿನ ಅಂತರಿಕ್ಷ ಪ್ರಯಾಣಕ್ಕಾದರೂ ಅವರನ್ನು ಸ್ನೇಹಿತರಂತೆ ಒಂದು ಗೂಡಿಸಬಹುದಿತ್ತು. ಪ್ರಯತ್ನದ ಕೆಲವು ಸಾಲು ಕಾದಂಬರಿಯ ಅಂತ್ಯದಲ್ಲಿ ಕಾಣಿಸಿಕೊಂಡಿದ್ದರೆ ನನ್ನಂತ ಓದುಗಳಿಗೆ ತೃಪ್ತಿಯ ಭಾವ ಮೂಡುತ್ತಿತ್ತು. ಇಷ್ಟು ವರ್ಷ ಪಟ್ಟ ಅವರ ಕಷ್ಟ, ಮನೋಸ್ಥಿತಿ ಈಗಲಾದರೂ ಸುಧಾರಿಸಿತಲ್ಲ ಎನ್ನುವ ಒಂದು ಮನೋಭಾವ.

ಅದೇನೇ ಇರಲಿ, ಕಥಾನಾಯಕಿ ಉತ್ತರ ಧುಡುಕಿನಿಂದ ತೆಗೆದುಕೊಂಡ ನಿರ್ಧಾರ ಅವಳಿಗೆ ಮುಳುವಾಗಿತ್ತು. ಅಂತರಿಕ್ಷ ಯಾನದಲ್ಲಿ ತನ್ನ ಜೀವನ ಹೀಗಿರುತ್ತದೆ ಎಂದು ಅವಳು ಯಾನ ಪ್ರಾರಂಭಿಸುವಾಗ ಅಂದುಕೊಂಡಿರಲಿಲ್ಲ. ಇಂಥ ಸುಧೀರ್ಘ ಪ್ರಯಾಣದಲ್ಲಿ ಎಲ್ಲರನ್ನೂ ಕಳೆದು ಕೊಂಡ ಭಾವ, ಒಂಟಿತನ, ಸರ್ಕಾರದ ಕುತಂತ್ರತೆಗೆ ಬಲಿಯಾದೆ ಎಂಬ ಮೂಕ ವೇದನೆ, ತನ್ನ ವೇದನೆಯನ್ನು ಯಾರಲ್ಲಿಯೂ ತೋಡಿಕೊಳ್ಳಲಾರದ ಪರಿಸ್ಥಿತಿಯನ್ನು ಅರಿತರೇ ಖೇದವೆನಿಸುತ್ತದೆ. ಮಕ್ಕಳಾದ ಬಳಿಕವೂ ಅವರು ದೊಡ್ಡವರಾಗಿ ಬುದ್ಧಿ ಬಂದ ಮೇಲೂ ಅವರ ಬಳಿಯೂ ಹೇಳಿಕೊಳ್ಳದೆ ಇದ್ದದ್ದನ್ನು ನೋಡಿದರೆ ಅವಳ ಮನಸ್ಸು ಎಷ್ಟು ಘಾಸಿಯಾಗಿತ್ತು ಅಂತ ಊಹಿಸಿಕೊಳ್ಳಬಹುದು. ಶೂನ್ಯ ಬದುಕನ್ನು ಬಾಳುತ್ತಿದಳು. ಬದುಕಿನಲ್ಲಿ ಆಸೆಯನ್ನೇ ಕಳೆದುಕೊಂಡಿದ್ದಳು.

ಇನ್ನು ಸುಧರ್ಶನ್ ಬಗ್ಗೆ ಹೇಳುವುದಾದರೆ, ಆತ ಕರ್ತವ್ಯನಿಷ್ಟ. ಸರ್ಕಾರ ತನಗೆ ವಹಿಸಿದ್ದ ಕೆಲಸವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ಆದರೆ ಈ ಕರ್ತವ್ಯದ ಸುಳಿಯಲ್ಲಿ ಉತ್ತರೆಯ ಮನಸ್ಸನ್ನು ಅರಿಯಲು ಅವನು ಹೆಚ್ಚು ಪ್ರಯತ್ನ ಪಡಲಿಲ್ಲ. ಸರ್ಕಾರಕ್ಕೆ ಹಾಗೂ ತನಗೆ ಮೋಸ ಮಾಡಿದಳು ಎಂಬ ಮನೋಭಾವನೆಯನ್ನು ಬೆಳಸಿಕೊಂಡುಬಿಟ್ಟಿದ್ದ. ಸ್ನೇಹಿತನ ತರ ವರ್ತಿಸಿದ್ದರೆ ಉತ್ತರೆಯನ್ನು ಸ್ನೇಹಿತೆಯನ್ನಾಗಿಯಾದರೂ ಪಡೆಯಬಹುದಿತ್ತು. ತಮ್ಮ ತಮ್ಮ ಅಹಮಿನಿಂದ ಇಬ್ಬರೂ ಅಪರಿಚಿತರಾಗಿಯೇ ಉಳಿದು ಬಿಟ್ಟರು.

ಇನ್ನೂ ಯಾನದ ಬಗ್ಗೆ ಹೇಳುವುದಾದರೆ, ಇದೊಂದು ಸುಧೀರ್ಘ ಪ್ರಯಾಣ. ವರ್ಷಾನುಗಟ್ಟಲೆ ಒಂದೇ ಅಂತರಿಕ್ಷ ವಾಹನ ದಲ್ಲಿ ಯಾನ ಮಾಡುವುದೆಂದರೆ ಅದನ್ನು ಅನುಭವಿಸಿದವರೇ ಬಲ್ಲರು. ಯಾನದ ಆರಂಭದಲ್ಲಿ ಇರುವ ಹುಮ್ಮಸ್ಸು, ದೇಶಭಾವ, ಕುತೂಹಲ ಎಲ್ಲ ನಿಧಾನವಾಗಿ ಕರಗುತ್ತದೆ. ಪ್ರತಿ ದಿನ ಅದೇ ನಕ್ಷತ್ರ, ಅದೇ ಆಕಾಶ, ಅದೇ ಊಟ, ಅದೇ ನಿದ್ದೆ, ಅದೇ ಯಂತ್ರಗಳು, ಕಂಪ್ಯೂಟರ್, ಅದೇ ಮುಖಗಳು ನಿರಾಸೆ ಮೂಡಿಸುತ್ತದೆ. ಇದೇ ಜೀವನವನ್ನೇ ತಾನು ಭಯಸಿದ್ದು ಎನ್ನುವ ಭಾವನೆ ಮನದಲ್ಲಿ ಮೂಡಿ ಬರುತ್ತದೆ. ತಾನ್ನಿನ್ನು ಮರಳಿ ಭೂಮಿಗೆ ಹೋಗಲಾಗುವುದಿಲ್ಲ ಎನ್ನುವ ಅರಿವು ಮೂಡಿದೊಡನೆಯೇ ಮನಸ್ಸು ಢೋಳಾಮಯವಾಗುತ್ತದೆ. ಜೀವನ ಇಷ್ಟೇನಾ ಎನ್ನಣಿಸಲು ಪ್ರಾರಂಭವಾಗುತ್ತದೆ. ಇಂತಹ ಯೋಚನೆ ಮೂಡಿದ ಬಳಿಕ ಬಾಳು ಧುಸ್ಥರವೆನುಸುತ್ತದೆ. ಬದುಕುವ ಆಸೆ ಮುಗಿದಿರುತ್ತದೆ. ಯಾವಾಗ ಅಂತ್ಯ ಅಂತ ಮನಸ್ಸುಹಪಹಪಿಸಲು ಶುರು ಮಾಡುತ್ತದೆ. ಆಗ ಬರುವ ಯೋಚನೆ ಅಂತರಿಕ್ಷ ಯಾನ ಸುಲಭದ ಮಾತಲ್ಲ ಎನ್ನುವುದು.

ಯಾನದ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸಿದ್ದೇನೆ. ತಪ್ಪುಗಳಿದ್ದರೆ ಕ್ಷಮೆ ಇರಲಿ.

No comments:

Post a Comment