Saturday, 8 August 2015

ನಾಯಿ-ನೆರಳು

ಪುನರ್ಜನ್ಮ, ಪೂರ್ವ ಕರ್ಮದ ಫಲಾಪಲದ ಸುತ್ತ ಹೆಣೆದುಕೊಂಡಿರುವ ಕಥಾವಸ್ತುವನ್ನೊಳಗೊಂಡ ಕಾದಂಬರಿ ನಾಯಿ-ನೆರಳು. ಭೈರಪ್ಪನವರು ಹೇಳಿರುವಂತೆ ಶೀರ್ಷಿಕೆಯಲ್ಲಿ ಬರುವ ನಾಯಿ ಪ್ರಾಚೀನ ಕರ್ಮದ ಸಂಕೇತ. ನಮ್ಮ ಪೂರ್ವ ಜನ್ಮದ ಕರ್ಮ ನಮ್ಮ ನೆರಳಾಗಿ ನಮ್ಮ ಜೊತೆಗಿರುತ್ತದೆ ಎನ್ನುವ ಭಾವ. ಇಂತಹ ಕಥಾವಸ್ತುವನ್ನು ಭೈರಪ್ಪನವರು ಹೇಗೆ ಚಿಂತಿಸಿ ತಮ್ಮ ಬರವಣಿಗೆಯಲ್ಲಿ ತಂದರು ಎಂದು ಆಶ್ಚರ್ಯವಾಗುತ್ತದೆ. ಇಲ್ಲಿ ಬರುವ ಕೆಲವು ಸನ್ನಿವೇಶಗಳು ನಮ್ಮನ್ನು ಚಿಂತನೆಗೆ ದೂಡುತ್ತವೆ. ಕಾದಂಬರಿಯನ್ನು ಓದುವಾಗ ನನಗೆಲ್ಲೂ ಇದೊಂದು ಕಥೆ ಎಂದೆಣಿಸಲಿಲ್ಲ. ಇದೊಂದು ನಿಜವಾದ ಚಿತ್ರಣ ಎಂದೆನಿಸುತಿತ್ತು.
ವಿಶ್ವೇಶ್ವರ ಮತ್ತೆ ಕ್ಷೇತ್ರಪಾಲನಾಗಿ ಹುಟ್ಟಿ ಬರುವ ಸನ್ನಿವೇಶದೊಂದಿಗೆ ಕಥಾ ಹಂದರ ತೆರೆದುಕೊಳ್ಳುತ್ತದೆ. ಎಂಟು ವರ್ಷದ ಹುಡುಗ ತನಗೆ ಮದುವೆಯಾಗಿದೆ, ಒಂದು ಮಗು ಇದೆ ಎಂದು ಹೇಳುತ್ತಾ ಎಲ್ಲರನ್ನೂ ಚಕಿತಗೊಳಿಸುತ್ತಾನೆ. ದೆವ್ವದ ಕಾಟ ಎಂದು ಮೊದಲು ಊರ ಜನ ಅಭಿಪ್ರಾಯಪಟ್ಟರೂ ಮುಂದೆ ಬರುವ ಸನ್ನಿವೇಶಗಳು ಪುನರ್ಜನ್ಮವನ್ನು ಎತ್ತಿ ಹಿಡಿಯುತ್ತದೆ. ಪ್ರಪಂಚ ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದ್ದಿದ್ದರೂ ಸಹ ಕೆಲವೊಂದು ವಿಷಯಗಳು, ಘಟನೆಗಳು ಮನುಷ್ಯನ ಯೋಚನಾ ಪರಿಧಿಗೆ ಸಿಲುಕುವುದಿಲ್ಲ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದಾಗ ಮನುಷ್ಯ ಮೂಕನಾಗುತಾನೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ಇಂತಹ ಘಟನೆಗಳು ನಡೆದ ಬಗ್ಗೆ ಎಷ್ಟೋ ಸಲ ನಾವು ದಿನಪತ್ರಿಕೆಯಲ್ಲಿ ಅಥವಾ ಟೀವೀಯಲ್ಲಿ ಬಿತ್ತರಿಸುವುದನ್ನು ನೋಡಿದ್ದೇವೆ. ಅಂತಹ ಸಮಯದಲ್ಲಿ ಪುನರ್ಜನ್ಮ ನಿಜವೇ ? ಎಂಬ ಪ್ರಶ್ನೆ ನಿಲ್ಲುತ್ತದೆ. ಆತ್ಮಕ್ಕೆ ಎಂತಹ ವಯಸ್ಸು ? ಶರೀರ ಹುಟ್ಟತ್ತೆ, ಬಿದ್ದೋಗತ್ತೆ ಎನ್ನುವ ಮಾತು ನಿಜವೇ ಎನಿಸುತ್ತದೆ. ಭೈರಪ್ಪನವರು ಇದನ್ನು ತುಂಬಾ ಸೊಗಸಾಗಿ ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಕಾದಂಬರಿ ಓದಿ ಮುಗಿಸಿದ ನಂತರ ಸಾಕಷ್ಟು ಪ್ರಶ್ನೆಗಳು, ಗೊಂದಲ ಮನದಲ್ಲಿ ಉಳಿಯುತ್ತದೆ.
ಪೂಜಾರಿಯ ಮೈಮೇಲೆ ಬರುವ ಗ್ರಾಮದೇವತೆ, ಹರಕೆಯನ್ನು ತೀರಿಸಲು ಕೆಂಡದ ಮೇಲೆ ನಡೆಯುವ ಜನ, ಕೊಳ್ಳಿದೆವ್ವ, ಬೇವಿನ ಮರದಲ್ಲಿ ಕಾಣಬರುವ ಸಿಹಿಯಾದ ಬೇವಿನಹಾಲು, ಬೆಟ್ಟದ ಮೇಲಿನ ಜೋಗಯ್ಯ, ಸನ್ಯಾಸಿ ಎಲ್ಲವುದರ ಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಇದಕ್ಕೆಲ್ಲ ವೈಜ್ಞಾನಿಕ ಆಧಾರವುಂಟೆ ಅಥವಾ ಇವು ಅಂಧ ಧರ್ಮದ ನಂಬಿಕೆಗಳ? ಉತ್ತರ ಓದುಗರಿಗೆ ಬಿಟ್ಟಿದ್ದು!