Sunday, 26 July 2015

ವಂಶವೃಕ್ಷ!

S.L ಭೈರಪ್ಪನವರ ವಂಶವೃಕ್ಷ ಕಾದಂಬರಿಯ ಬಗ್ಗೆ ನನ್ನ ವಿಮರ್ಶೆ......


ಮಾನವ ಸಂಬಂಧಗಳ, ಮನಸ್ಸಿನ ಭಾವನೆಗಳ , ಸಮಾಜದ ಕಟ್ಟು ಪಾಡುಗಳ ಸುತ್ತ ಬೆಸೆದಿರುವ ಕಥಾವಸ್ತುವನ್ನೊಳಗೊಂಡ ಅಧ್ಬುತವಾದ ಕಾದಂಬರಿ ವಂಶವೃಕ್ಷ . ಮನುಷ್ಯನ ಆಂತರ್ಯದ ಅರಿವು , ಮನಸ್ಸಿನ ದ್ವಂದ್ವ , ಬೇಗುದಿ , ಜಿಗುಪ್ಸೆ, ತೊಳಲಾಟವನ್ನು ಅರ್ಥವತ್ತಾಗಿ ಬಿಂಬಿಸಿದ್ದಾರೆ ಭೈರಪ್ಪನವರು. ಇಲ್ಲಿ ಬರುವ ಕೆಲೆವೊಂದು ಪಾತ್ರಗಳು ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ಇಂತಹ ಕೆಲವೊಂದು ಪಾತ್ರಗಳ ಬಗ್ಗೆ ನನ್ನ ಅಭಿಪ್ರಾಯ.

ಮೊದಲನೆಯದಾಗಿ ಶ್ರೋತ್ರಿಗಳ ಪಾತ್ರ . ಇವರ ವ್ಯಕ್ತಿತ್ವ ಮನವನ್ನು ಮುಟ್ಟುತ್ತದೆ . ಅವರ ಉದಾತ್ತ ಮನೋಭಾವ , ಸಂಕಲ್ಪ ಶಕ್ತಿ , ಕರ್ತವ್ಯ ನಿಷ್ಟತೆ , ಧಾರ್ಮಿಕತೆ , ಆಧ್ಯಾತ್ಮದ ಬಗ್ಗೆ ಇರುವ ಆಳವಾದ ವಿಶ್ವಾಸ , ಇಂತಹ ಮತ್ತೊಬ್ಬ ವ್ಯಕ್ತಿಯನ್ನು ಈಗಿನ ಕಾಲದಲ್ಲಿ ಕಾಣುವುದು ಅಪರೂಪ . ಎಂತಹ ಪರಿಸ್ಥಿತಿಯಲ್ಲೂ ತಮ್ಮ ಮನಸ್ಸಿನ ಸ್ಥಿಮಥಿಯನ್ನು ಕಳೆದುಕೊಳ್ಳುವುದಿಲ್ಲ . ತಮ್ಮ ಮನೋಭಲದಿಂದ ಎಂತಹ ಕಠಿಣ ಪರಿಸ್ಥಿಯನ್ನೂ ನಿಗ್ರಹಿಸುತ್ತಿದ್ದರು. ಕಾತ್ಯಾಯಿನಿಯ ಬಗ್ಗೆ ತೋರಿದ ಅವರ ಪ್ರೀತಿ , ತಳೆದ ನಿರ್ಧಾರ , ರಾಯರ ಬಗ್ಗೆ ಇರುವ ವಿಶ್ವಾಸ , ಗೌರವ , ಮೊಮ್ಮಗನ ಬಗ್ಗೆ ಇರುವ ಪ್ರೀತಿ , ಲಕ್ಷ್ಮಿಯ ಬಗ್ಗೆ ಇರುವ ನಂಬಿಕೆ ಅಪಾರ . ತನ್ನ ಮಗನು ಸತ್ತ ಮೇಲೂ ಸೊಸೆಯನ್ನು ಮಗಳ ತರಹ ಪ್ರೀತಿಯಿಂದ ನಡೆಸಿಕೊಂಡರು . ಅವಳ ಮನಸ್ಸಿಗೆ ದುಃಖವಾಗುವ ಹಾಗೆ ಎಂದೂ ನಡೆದುಕೊಂಡವರಲ್ಲ. ಮನೆಯವರ ಇಷ್ಟಕ್ಕೆ ವಿರುದ್ದವಾಗಿ ಅವಳಿಗೆ ವಿಧವೆಯ ಪಟ್ಟ ಕಟ್ಟದೆ, ಕಾಲೇಜ್ ಓದಲು ಕಳುಹಿಸಿದರು . ನಂತರ ಸೊಸೆ ಇನ್ನೊಂದು ಮದುವೆಯಾಗುವ ಬಯಕೆಯನ್ನು ತಿಳಿಸಿದಾಗಲು ಅವಳ ಮೇಲೆ ಅವರಿಗೆ ಕೋಪ ಬರಲಿಲ್ಲ . ತನ್ನ ಮೊಮ್ಮಗನನ್ನು ಕರೆದು ಕೊಂಡು ಹೋಗಲೂ ಅವಳನ್ನು ತಡೆಯಲಿಲ್ಲ. ಅವಳು ಮಗುವನ್ನು ಬಿಟ್ಟು ಹೊರಟು ಹೋದಾಗಲೂ, ತಾಯಿ ಪ್ರೀತಿಯ ಕೊರತೆ ಇಲ್ಲದೆ ಅವನನ್ನು ಬೆಳೆಸಿದ್ದರು . ಮೊಮ್ಮಗನ ಮನಸ್ಸಿನಲ್ಲಿ ಎಂದೂ ತಾಯಿಯ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಭಿತ್ತಲಿಲ್ಲ . ಆದರೆ ಕೊನೆಯಲ್ಲಿ ತಳೆದ ನಿರ್ಧಾರ ಯಾಕೋ ನನಗೆ ಸರಿಕಾಣಲಿಲ್ಲ . ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವವನ್ನು ಪಡೆಯಲು ಹೊರಡಬೇಕಿತ್ತೆ ಎನ್ನುವ ಪ್ರಶ್ನೆ ನಿಲ್ಲುತ್ತದೆ . ಅವರು ಮನಸ್ಸು ಮಾಡಿದಿದ್ದರೆ ಕಾತ್ಯಾಯಿನಿ ಹಾಗು ಚೀನಿಯನ್ನು ಮತ್ತೆ ಒಂದು ಗೂಡಿಸಬಹುದಿತ್ತು. ಅವಳ ಬರಡು ಬದುಕಿನಲ್ಲಿ ಒಂದು ಬೆಳಕು ಮೂಡಿಸಬಹುದಿತ್ತು.

ಕಾತ್ಯಾಯಿನಿ, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಪುಟ್ಟ ಮಗುವಿನ ಜೊತೆ ಪಡುವ ಅವಳ ಮನಸ್ಸಿನ ತೊಳಲಾಟವನ್ನು ಕಾಣಬಹುದು . ಮನೆಗೆ ಮಗಳಾಗಿ , ಸೊಸೆಯಾಗಿ , ಚೀನಿಗೆ ಪ್ರೀತಿಯ ತಾಯಿಯಾಗಿ ಕಾಣುವ ಅವಳ ಪಾತ್ರ ಮುಂದೆ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳಲು ಹೊರಟಾಗ ಅವಳು ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ. ಸ್ತ್ರೋತ್ರಿಗಳ ಮುಂದೆ ತನ್ನ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಅಸಮರ್ಥಳಾದಾಗ ಪತ್ರದ ಮುಖಾಂತರ ತನ್ನ ಮನಸ್ಸಿನ ತೊಳಲಾಟವನ್ನು ತೋಡಿಕೊಳ್ಳುವಾಗ ಅವಳ ಮನಸ್ಸಿನಲ್ಲಿ ನಡೆಯುವ ದ್ವಂದ್ವವನ್ನು ಗುರುತಿಸಬಹುದು . ಕೊನೆಗೆ ಮಗನನ್ನು ಬಿಡಲಾರದೆ ಬಿಟ್ಟು ತನ್ನದೇ ಆದ ಪ್ರಪಂಚಕ್ಕೆ ಕಾಲಿಡಲು ಹೊರಟಾಗ ಅವಳ ಮಾತೃತ್ವ ತೊಡೆದು ಹೋಗುತ್ತದೆ . ತನ್ನ ಹೊಸ ಬದುಕಿನಲ್ಲಿ ಕಾಲಿಟ್ಟ ಮೇಲೂ ಅವಳ ಯಾವುದೋ ಒಂದು ಮನಸ್ಸಿನ ಸುಪ್ತ ಮೂಲೆಯಲ್ಲಿ ದುಃಖ ಮಡುವಾಗಿರುತ್ತದೆ. ತನ್ನ ಎಲ್ಲ ಬಸಿರೂ ನಾಶವಾದಾಗ , ಅವಳ ಆ ದುಃಖ ಒಡೆದು ಬರುತ್ತದೆ . ಕೊನೆಗೆ ಚೀನಿಯೂ ಅವಳನ್ನು ಧಿಕ್ಕರಿಸಿದಾಗ , ಅವಳ ಮನಸ್ಸು ಹೃದಯ ಒಡೆದು ಹೋಗುತ್ತದೆ . ಅದರ ನೆನಪಿನಲ್ಲಿಯೇ ಕೃಶವಾಗಿ ಕೊನೆಯುಸಿರುಯುತ್ತಾಳೆ . ತುಂಬಾ ಬಲಹೀನ ಹೃದಯಿಯಾಗುತ್ತಾಳೆ. ರಾಜನನ್ನು ಮಾದುವೆಯಾಗುವಾಗ ಇದ್ದ ಮನಸ್ಸಿನ ದೃಢತೆ , ತನ್ನ ಮಗನನ್ನು ಪಡೆಯಲು ಪಟ್ಟ ಪ್ರಯತ್ನದಲ್ಲಿ ಕಾಣಸಿಗುವುದಿಲ್ಲ . ಮನಸ್ಸು ಮಾಡಿದಿದ್ದರೆ ಸ್ರೋತ್ರಿಗಳನ್ನು ಕಂಡು ಮಗನ ಪ್ರೀತಿಯನ್ನು ಮತ್ತೆ ಗಳಿಸಬಹುದಿತ್ತು .

ಸದಾಶಿವರಾಯರು ತಮ್ಮ ಜ್ಞಾನಸಾಧನೆಗಾಗಿ ಹೆಂಡತಿ ನಾಗಲಕ್ಷ್ಮಿಯನ್ನು ನಿರ್ಲಕ್ಷಿಸಿ ಕರುಣಾಳ ಹಿಂದೆ ಹೋದದ್ದು ಯಾಕೋ ಸರಿಕಾಣಲಿಲ್ಲ . ತಮ್ಮ ಸಾಧನೆಯ ಗುರಿಮುಟ್ಟಲು ಅವರಿಗೆ ಹಲವಾರು ಮಾರ್ಗಗಳಿದ್ದವು. ಆದರೆ ತಮ್ಮ ತಪ್ಪಿನರಿವಾಗಿ ಕೊನೆಗೆ ಹೆಂಡತಿಯ ಜೊತೆ ಒಂದಾದದ್ದು ಸಮಾಧಾನದ ವಿಷಯ . ಆದರೆ ಆ ಸಮಾಧಾನ ಹೆಚ್ಚು ಕಾಲ ಉಳಿಯುವುದಿಲ್ಲ.

ಇನ್ನು ರಾಜನ ಬಗ್ಗೆ ಹೇಳುವುದಾದರೆ , ಈತನದು ಆದರ್ಶ ವ್ಯಕ್ತಿತ್ವ . ತನ್ನ ಅಣ್ಣನ ಸಂಸಾರ ಮುಳುಗಿದಾಗ , ಇವನೇ ತನ್ನ ಅತ್ತಿಗೆ ಹಾಗೂ ಅವರ ಮಗನಿಗೆ ನೆರಳಾಗಿ ನಿಂತಿದ್ದು . ತನ್ನ ಅಣ್ಣ ಮರುಮದುವೆಯಾದಾಗಲೂ ಸಹ ಅವರ ಮೇಲೆ ಕೋಪಗೊಳ್ಳಲಿಲ್ಲ. ಅವರ ಮೇಲಿದ್ದ ಗೌರವ ಕಮ್ಮಿಯಾಗಲಿಲ್ಲ . ಆ ಮದುವೆಯ ಹಿಂದಿನ ಪರಿಸ್ಥಿತಿಯ ಅರಿವು ಅವನಿಗಿತ್ತು . ಕಾತ್ಯಾನಿಯ ವಿಷಯದಲ್ಲೂ ತನ್ನ ಉನ್ನತ ವ್ಯಕ್ತಿತ್ವವನ್ನು ಮೆರೆದಿದ್ದರು . ಆಕೆ ವಿಧವೆಯೆಂದು ಗೊತ್ತಿದ್ದರೂ , ಒಂದು ಮಗುವಿನ ತಾಯಿ ಅಂತ ಅರಿವಿದ್ದರೂ ಅವಳನ್ನು ಪ್ರೀತಿಸಿ ಮದುವೆಯಾಗಲು ಮುಂದೆ ಬಂದು , ತನ್ನ ಆದರ್ಶವನ್ನು ಮೆರೆದಿದ್ದರು. ಮದುವೆಯಾದ ಮೇಲೂ ಅವಳ ವ್ಯಕ್ತಿತ್ವಕ್ಕೆ ಧಕ್ಕೆ ಬರದ ಹಾಗೆ ನೋಡಿಕೊಂಡರು . ಆದರೆ ಕಾತ್ಯಾಯಿನಿಯನ್ನು ಮದುವೆಯಾದ ಮೇಲೆ ಅವಳ ಮಗನ ಅಗಲಿಕೆಯ ದುಃಖವನ್ನು ಅರಿತ್ತಿದ್ದನು. ತನ್ನ ಎಲ್ಲ ಬಸಿರ ಕುಡಿಗಳೂ ನಾಶವಾದಾಗ , ಕಾತ್ಯಾಯಿನಿ ಅದರ ನೆನಪಿನಲ್ಲೇ ಕ್ರುಶಳಾದಾಗ ಈತ ಶ್ರೋತ್ರಿಗಳನ್ನು ಕಂಡು ಮಾತಾಡಿ ಚೀನಿಯ ಜೊತೆ ಒಂದು ಕೂಡಿಸಲು ಪ್ರಯತ್ನ ಮಾಡಬಹುದಿತ್ತು . ಇದರಿಂದ ಕಾತ್ಯಾಯಿನಿಯನ್ನು ಉಳಿಸಿಕೊಳ್ಳಬಹುದಿತ್ತು . ಈತ ಎಂದೂ ಶ್ರೋತ್ರಿಗಳ ಜೊತೆ ಸಂಪರ್ಕ ಮಾಡದೆ ಇದ್ದದ್ದು ಆಶ್ಚರ್ಯ ಎನಿಸುತ್ತದೆ . ಶ್ರೋತ್ರಿಗಳ ಉನ್ನತ ವ್ಯಕ್ತಿತ್ವದ ಅರಿವು ಕಾತ್ಯಯಿನಿಯಿಂದ ತಿಳಿದ್ದಿತ್ತು. ಅದರೂ ಒಮ್ಮೆಯಾದರೂ ಅವರನ್ನು ಭೆಟ್ಟಿ ಮಾಡಿ ಕಾತ್ಯಾಯಿನಿಯನ್ನು ಮದುವೆ ಯಾಗುವ ವಿಚಾರದ ಬಗ್ಗೆ , ಚೀನಿಯನ್ನು ತನ್ನ ಮಗುವೆಂದು ಸ್ವೀಕರಿಸುವ ಬಗ್ಗೆ ಅವರ ಬಳಿ ಮಾತನಾಡಬಹುದಿತ್ತು . ಕಾತ್ಯಾಯಿನಿಯನ್ನು ಮದುವೆಯಾದ ಮೇಲಾದರೂ ಅವರ ಬಳಿ ಒಮ್ಮೆಹೋಗಿ ಕ್ಷಮೆ ಕೇಳಿ ಆಶೀರ್ವಾದವನ್ನು ಪಡೆಯಬಹುದಿತ್ತು. ಆದರೆ ಆ ಪ್ರಯತ್ನ ಎಲ್ಲೂ ಕಾಣಬರುವುದಿಲ್ಲ . ಎಲ್ಲ ನಿರ್ಧಾರವನ್ನು ಕಾತ್ಯಾಯಿನಿಗೆ ಬಿಟ್ಟಿದ್ದರು . ಇದು ಅವರ ವ್ಯಕ್ತಿತ್ವಕ್ಕೆ ಸ್ವಲ್ಪ ವ್ಯತಿರಿಕ್ತವಾಗಿತ್ತು ಅನ್ನಿಸುತ್ತದೆ.

ವಂಶವೃಕ್ಷವು ಸಂಭಂಧಗಳ ಬೇರುಗಳಿಂದ, ಪ್ರೀತಿ, ಅಭಿಮಾನ, ನಂಬಿಕೆಗಳ ಆರೈಕೆಯಿಂದ ಭದ್ರವಾಗಿ ನಿಂತು ಹೆಮ್ಮರವಾಗಿ ಬೆಳೆಯಲು ಸಾಧ್ಯ !!!

ತಪ್ಪುಗಳಿದ್ದರೆ ಕ್ಷಮೆ ಇರಲಿ.